ಪುಟ್ಟಚೀಟಿಯ ದೊಡ್ಡ ಲೋಕ

ಪುರವಣಿ›ಮೆಟ್ರೋ

ಪುಟ್ಟಚೀಟಿಯ ದೊಡ್ಡ ಲೋಕ

ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹ ಬಹಳ ಹಳೆಯ ಹವ್ಯಾಸಗಳು. ಆದರೆ, ಇವು ಇತಿಹಾಸದ ಅದ್ಭುತ ದಾಖಲೆಗಳಾಗಿವೆ. ಐತಿಹಾಸಿಕ ಘಟನೆಗಳು, ವ್ಯಕ್ತಿಗಳ ಗೌರವಾರ್ಥ ಅಂಚೆಚೀಟಿ ಬಿಡುಗಡೆ ಮಾಡುವುದು ಎಲ್ಲ ದೇಶಗಳಲ್ಲೂ ಚಾಲ್ತಿಯಲ್ಲಿದೆ. ಇದು ಅತ್ಯಂತ ದೊಡ್ಡ ಗೌರವವಾಗಿದೆ.

ಭಾರತ ವರ್ಣರಂಜಿತ ಮತ್ತು ಮೌಲ್ಯಾಧಾರಿತ ಅಂಚೆಚೀಟಿ ಬಿಡುಗಡೆ ಮಾಡುವುದರಲ್ಲಿ ಎರಡನೇ ಸ್ಥಾನದಲ್ಲಿದೆ. ಬ್ರಿಟನ್‌ ವೈವಿಧ್ಯಮಯ ಅಂಚೆಚೀಟಿ ಬಿಡುಗಡೆ ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ ಮಹಾತ್ಮಾಗಾಂಧಿಯ ಭಾವಚಿತ್ರವಿರುವ ಅಂಚೆಚೀಟಿಗಳನ್ನು ವಿಶ್ವದ 127 ರಾಷ್ಟ್ರಗಳು ಬಿಡುಗಡೆ ಮಾಡಿವೆ.

ಇಂಗ್ಲೆಂಡ್‌ ಕೂಡ ಗಾಂಧಿಯ ಅಂಚೆಚೀಟಿ ಬಿಡುಗಡೆ ಮಾಡಿದೆ. ಇದು ವಿಶೇಷ ಯಾಕೆಂದರೆ, ಯುರೋಪಿಯನ್ನರಿಂದ ಏಷ್ಯಾದ ವ್ಯಕ್ತಿಯೊಬ್ಬ ಅಂಚೆಚೀಟಿಯಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು. ಯುರೋಪಿಯನ್ನರಿಂದ ಪ್ರಶಂಸೆಗೊಳಗಾದ ಏಷ್ಯಾದ ಏಕೈಕ ವ್ಯಕ್ತಿ ಗಾಂಧಿ. 1968ರಲ್ಲಿ ಇಂಗ್ಲೆಂಡ್‌ ಬಿಡುಗಡೆ ಮಾಡಿದ ಗಾಂಧಿ ಚಿತ್ರವಿರುವ ಅಂಚೆಚೀಟಿ ವರ್ಣ, ವಿನ್ಯಾಸ, ರಚಿಸಿದ ಕಲಾವಿದ ಎಲ್ಲ ವಿಷಯದಲ್ಲೂ ವಿಶೇಷ ಎನಿಸಿದೆ.

ಇಂತಹ ಅಪರೂಪದ ಅಂಚೆಚೀಟಿಗಳನ್ನು ಸಂಗ್ರಹಿಸಿ ಪ್ರದರ್ಶಿಸುತ್ತಿರುವವರು ಎಚ್‌ಎಎಲ್‌ ಉದ್ಯೋಗಿಯಾಗಿ ನಿವೃತ್ತರಾಗಿರುವ ಪ್ರಭಾಕರ. ಅವರು ಕಳೆದ 35 ವರ್ಷಗಳಿಂದ ಅಂಚೆಚೀಟಿ ಸಂಗ್ರಹದ ಹವ್ಯಾಸ ಇಟ್ಟುಕೊಂಡವರು. ಅದೊಂದು ಜ್ಞಾನವಾಹಕ ಎಂದುಕೊಂಡವರು. ಹಳ್ಳಿ ಹಳ್ಳಿಗಳಿಗೆ ಸೈಕಲ್‌ನಲ್ಲಿ ತೆರಳಿ ಅಂಚೆಚೀಟಿ ಪ್ರದರ್ಶಿಸುವ ಪ್ರಭಾಕರ ಅವರ ಬಳಿ ಸುಮಾರು 50 ಸಾವಿರ ಅಂಚೆಚೀಟಿಗಳಿವೆ.

ಇತ್ತೀಚೆಗೆ ನಗರದಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಅವರ ಅಂಚೆಚೀಟಿ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಅಲ್ಲಿ ಅವರು ಮಾಧ್ಯಮಕ್ಕೆ ಸಂಬಂಧಿಸಿದ 1500 ಅಂಚೆಚೀಟಿಗಳನ್ನು ಪ್ರದರ್ಶಿಸಿದ್ದರು. ಪತ್ರಿಕೆಗಳ ಸೇವೆಯನ್ನು ಪರಿಗಣಿಸಿ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವುದು ವಿದೇಶದಲ್ಲಿ ಚಾಲ್ತಿಯಲ್ಲಿದೆ.

ಪ್ರಭಾಕರ ಅವರ ಬಳಿ ವಿಶ್ವದ ಎಲ್ಲ ದೇಶಗಳ ಅಂಚೆಚೀಟಿಗಳಿವೆ. ಸಿಂಗಪುರ, ಕೆನಡಾ, ಬ್ಯಾಂಕಾಕ್‌, ಇಟಲಿ ಸೇರಿದಂತೆ ಅನೇಕ ಕಡೆ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಏಳು ಬಾರಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಅವರ ಪ್ರದರ್ಶನವನ್ನು ವೀಕ್ಷಿಸಿದವರಲ್ಲಿ ಮೊದಲ ಗಗನಯಾತ್ರಿ ರಾಕೇಶ್‌ ಶರ್ಮಾ ಕೂಡ ಸೇರಿದ್ದಾರೆ.

ಗಾಂಧಿ, ಮಾಧ್ಯಮ, ಕ್ರೀಡೆ, ಬಾಹ್ಯಾಕಾಶ, ವಿಶ್ವಸಂಸ್ಥೆ ಹೀಗೆ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ ಚೀಟಿಗಳ ಸಂಗ್ರಹ ಇವರ ಬಳಿ ಇವೆ. ಮೊನ್ನೆಯಷ್ಟೇ ಸಚಿನ್‌ ತೆಂಡೂಲ್ಕರ್‌ ಅವರ ವಿದಾಯದ ಸರಣಿಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಅಂಚೆಚೀಟಿ ಇವರ ಸಂಗ್ರಹಕ್ಕೆ ಸೇರ್ಪಡೆಗೊಂಡಿದೆ.
ಕಳೆದ 35 ವರ್ಷಗಳಿಂದ ಅಂಚೆಚೀಟಿ ಸಂಗ್ರಹವನ್ನು ಮಾಡುತ್ತಿದ್ದೇನೆ. ಹವ್ಯಾಸವಾಗಿಯಷ್ಟೇ ಅದನ್ನು ನೋಡದೆ ಶಾಲಾ ಮಕ್ಕಳಿಗೆ ಅದು ಜ್ಞಾನವಾಹಕವಾಗುವಂತೆ ಮಾಡುತ್ತಿದ್ದೇನೆ. ಚಿಕ್ಕಚಿತ್ರದಲ್ಲಿ ಅಂಚೆಚೀಟಿ ನೀಡುವ ಮಾಹಿತಿ ಅಗಾಧ. ಒಂದು ಅಂಚೆಚೀಟಿ ಆ ಕಾಲದ ಪ್ರಮುಖ ಮಾಹಿತಿ, ವ್ಯಕ್ತಿ, ಘಟನೆಯನ್ನು ತಿಳಿಸುತ್ತದೆ.

ಹಾಗಾಗಿ ಮಕ್ಕಳಿಗೆ ಮಾಹಿತಿ ರವಾನೆ ಮಾಡುವ ಉದ್ದೇಶದಿಂದ ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ಸಮಾವೇಶ, ಉತ್ಸವ, ವಾರ್ಷಿಕೋತ್ಸವ ಹೀಗೆ ಎಲ್ಲೆಂದರಲ್ಲಿ ಸೈಕಲ್‌ನಲ್ಲೇ ತೆರಳಿ ಪ್ರದರ್ಶನ ಮಾಡುತ್ತಿದ್ದೇನೆ. ಕರ್ನಾಟಕ ಫಿಲಾಟೆಲಿಕ್‌ ಅಸೋಸಿಯೇಷನ್‌ ಸದಸ್ಯನಾಗಿರುವ ಕಾರಣ ಬೇರೆ ಸಂಗ್ರಾಹಕರ ಜೊತೆ ಅಂಚೆಚೀಟಿಗಳನ್ನು ವಿನಿಮಯ ಮಾಡಿಕೊಳ್ಳುತ್ತೇನೆ. ಕೆಲವೊಮ್ಮೆ ಹೆಚ್ಚು ಹಣ ಕೊಟ್ಟು ಕೊಳ್ಳಬೇಕಾದದ್ದು ಅನಿವಾರ್ಯ.

ಆದರೆ ಸಂಗ್ರಹ ಮಾಡುವ ಕಡೆಗೇ ಒಲವು ಇರುವ ಕಾರಣ ಹಣ ಕಳೆದುಕೊಳ್ಳಬೇಕಾಗುತ್ತದೆ. ಎಲ್ಲಿಯೂ ಪ್ರವೇಶ ಧನವಿಟ್ಟು ಹಣ ಸಂಗ್ರಹಿಸಿಲ್ಲ. ಈವರೆಗೆ 1860 ಪ್ರದರ್ಶನಗಳನ್ನು ಮಾಡಿದ್ದೇನೆ. ಎಲ್ಲವೂ ಉಚಿತ. ಇಂದಿನ ಯುವಕರಲ್ಲಿ ಅಂಚೆಚೀಟಿ ಸಂಗ್ರಹದ ಹವ್ಯಾಸ ಹೆಚ್ಚಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಹೊಸ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವಾಗಲೆಲ್ಲ ಕವಿ ಕುವೆಂಪು ಅವರನ್ನು ಗಣನೆಗೆ ತೆಗೆದುಕೊಳ್ಳದಿರುವ ಬಗ್ಗೆ ಬೇಸರವಾಗುತ್ತದೆ. ಅನೇಕ ಸಲ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ.
–ಪ್ರಭಾಕರ.

Source : http://www.prajavani.net/