ಮಠದ ಮಣ್ಣಲ್ಲಿ ಭಕುತಿಯ ಕೃಷಿ

ಮಠದ ಮಣ್ಣಲ್ಲಿ ಭಕುತಿಯ ಕೃಷಿ

  •  12 reads
  • Tue, 05/21/2013 – 01:00
ಕೃಷಿಯಲ್ಲಿ ತೊಡಗಿಕೊಂಡಿರುವ ರೇವಣಸಿದ್ಧೇಶ್ವರ ಸ್ವಾಮೀಜಿ

ಮಠಾಧೀಶರೆಂದರೆ ಧರ್ಮ ಬೋಧನೆ ಮಾಡುವವರು, ಭಕ್ತರ ಮನೆ ಮನೆಗೆ ತೆರಳಿ ಪಾದಪೂಜೆ ಮಾಡಿಸಿಕೊಂಡು ಆಶೀರ್ವಾದ ನೀಡುವವರು ಎಂಬುದು ಸಾಮಾನ್ಯ ಕಲ್ಪನೆ. ಆದರೆ `ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ಮಾತನ್ನು ನಂಬಿದ ಅನೇಕ ಮಠಾಧೀಶರೂ ನಮ್ಮಳಗಿದ್ದಾರೆ. ಅಂಥವರಲ್ಲಿ ಒಬ್ಬರು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಅರಳೆಲೆಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ.

ಕೃಷಿಯನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡು ಅದರಲ್ಲಿಯೇ ಸಾಧನೆ ಮಾಡುತ್ತಿದ್ದಾರೆ ಇವರು. ಬಾಳೇಹೊನ್ನೂರು ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಅರಳೆಲೆಹಿರೇಮಠದ ಪಟ್ಟಾಧ್ಯಕ್ಷರಾಗಿರುವ ಇವರು ದೇವರ ಪೂಜೆ ಮಾಡುವಂತೆ ನಿತ್ಯವೂ ಹೊಲದಲ್ಲಿ ನಿಷ್ಠೆಯಿಂದ ಕಾಯಕ ಪೂಜೆ ನಡೆಸುತ್ತಾರೆ.

ಬೆಳಗಾದೊಡನೆ ಮಠದ ಪೂಜಾ ಕಾರ್ಯಗಳನ್ನು ಪೂರೈಸಿ ಹೊಲಕ್ಕೆ ತೆರಳುವ ಸ್ವಾಮೀಜಿ ಭೂ ತಾಯಿಯ ಸೇವೆಯನ್ನು ಭಕ್ತಿಯಿಂದ ಮಾಡುತ್ತಾರೆ. ಪೂಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸವೂರ ರಸ್ತೆಯಲ್ಲಿ ಒಟ್ಟು 48 ಎಕರೆ ಹೊಲವನ್ನು ಹೊಂದಿರುವ ಮಠಾಧೀಶರು ಕೊಳವೆ ಬಾವಿ ಕೊರೆಸಿ ಹನಿ ನೀರಾವರಿ ಪದ್ಧತಿಯಲ್ಲಿ ಈವರೆಗೆ ಕಬ್ಬು, ತೆಂಗು, ಬಾಳೆ, ಪಪ್ಪಾಯಿ ಕೃಷಿ ಕೈಗೊಂಡು ಉತ್ತಮ ಲಾಭ ಮಾಡಿಕೊಂಡಿದ್ದಾರೆ. ಸ್ವಂತ ಪರಿಶ್ರಮದಿಂದ ಭೂಮಿಯನ್ನು ಹದಗೊಳಿಸುತ್ತಾರೆ. ಹೊಲ ರಂಟೆ ಹೊಡೆಯುತ್ತಾರೆ, ಹರಗುತ್ತಾರೆ, ಗಿಡಗಳಿಗೆ ಮಡಿಗಳನ್ನೂ ಮಾಡುತ್ತಾರೆ.

ವಿವಿಧ ಬೆಳೆಗಳ ತಾಣ
ಎರಡು ವರ್ಷಗಳಿಂದ ಚಿಕ್ಕು ಬೆಳೆಯುತ್ತಿರುವ ರೇವಣಸಿದ್ಧೇಶ್ವರ ಸ್ವಾಮಿಗಳು 8 ಎಕರೆ ಪ್ರದೇಶದಲ್ಲಿ 30/30 ಅಡಿ ಅಳತೆಯಲ್ಲಿ ಕೊಲ್ಕತ್ತಾದಿಂದ ತರಿಸಿದ ಕ್ರಿಕೆಟ್ ಬಾಲ್ ತಳಿಯ 800 ಚಿಕ್ಕು ಸಸಿಗಳನ್ನು ನಾಟಿ ಮಾಡಿದ್ದಾರೆ. ಅಲ್ಲದೆ ಇದರ ಜೊತೆಗೆ ಎರಡು ಚಿಕ್ಕು ಗಿಡಗಳ ಮಧ್ಯೆ ಅಂತರ ಬೆಳೆಯಾಗಿ ಕೊಲ್ಲತ್ತಾದಿಂದಲೇ ತರಿಸಿದ ಸೀಡ್‌ಲೆಸ್ ಪೇರಲ ಹಣ್ಣುಗಳನ್ನೂ ಬೆಳೆಯುತ್ತಿದ್ದಾರೆ. ಇದಕ್ಕಾಗಿ ಈವರೆಗೆ ಸ್ವಾಮೀಜಿ ಒಂದು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.

ರಾಸಾಯನಿಕ ಗೊಬ್ಬರವನ್ನು ಇವರು ಬಳಸುತ್ತಿಲ್ಲ. ನೈಸರ್ಗಿಕ ಪದ್ಧತಿಯಲ್ಲಿ ಬೆಳೆದಿರುವ ಇವರ ತೋಟದ ಹಣ್ಣುಗಳು ಆಕಾರದಲ್ಲಿ ಬಹಳ ದೊಡ್ಡದಿದ್ದು ತಿನ್ನಲು ಕೂಡ ಬಹಳ ರುಚಿಯಾಗಿವೆ. ಪ್ರತಿ ಟನ್‌ಗೆ 14 ಸಾವಿರ ದರದಂತೆ ಕಳೆದ ವರ್ಷ 5-6 ಟನ್ ಚಿಕ್ಕು ಹಾಗೂ 80 ಸಾವಿರ ರೂಪಾಯಿ ಕಿಮ್ಮತಿನ ಪೇರಲಹಣ್ಣು ಮಾರಾಟ ಮಾಡಿ ಸ್ವಾಮೀಜಿ ಲಾಭ ಗಳಿಸಿದ್ದಾರೆ. ಈ ವರ್ಷವೂ 8-10 ಟನ್ ಚಿಕ್ಕು ಫಸಲು ಬರುವ ನಿರೀಕ್ಷೆ ಇದೆ. `ಚಿಕ್ಕು ಬೆಳೆಸಲು ಒಂದು ಬಾರಿ ಬಂಡವಾಳ ಹಾಕಿದರೆ ಸಾಕು. ಮುಂದಿನ 35 ವರ್ಷಗಳವರೆಗೆ ಅದು ಫಲ ನೀಡುತ್ತಲೇ ಇರುತ್ತದೆ. ಹೀಗಾಗಿ ಚಿಕ್ಕು ಲಾಭದಾಯಕ ಕೃಷಿಯಾಗಿದೆ’ ಎಂದು ಅವರು ಖುಷಿಯಿಂದ ಹೇಳುತ್ತಾರೆ. `ಭೂ ತಾಯಿಯನ್ನು ನಂಬಿ ದುಡಿದರೆ ಅವಳು ಎಂದೂ ರೈತರ ಕೈ ಬಿಡುವುದಿಲ್ಲ’ ಎಂದು ಹೇಳುತ್ತಾರೆ. ಈಚಿನ ದಿನಗಳಲ್ಲಿ ರೈತರು ಕಷ್ಟಪಟ್ಟು ದುಡಿಯುವುದನ್ನೇ ಮರೆತಿದ್ದಾರೆ. ಹೀಗಾಗಿ ಅಂಥವರಿಗೆ ಒಕ್ಕಲುತನ ಲಾಭವಾಗಿ ಕಾಣುತ್ತಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ.

ಬಳಕೆ ಮಾಡದ ರಾಸಾಯನಿಕ
ಶ್ರೀಗಳು ಮಠದಲ್ಲಿನ ಜಾನುವಾರುಗಳಿಂದ ಪ್ರತಿ ವರ್ಷ 8-10 ಟ್ರ್ಯಾಕ್ಟರ್ ತಿಪ್ಪೆ ಗೊಬ್ಬರ ದೊರೆಯುತ್ತದೆ. ಇನ್ನು ಬೆಳೆಗಳಿಗೆ ಬರುವ ಕ್ರಿಮಿ ಕೀಟಗಳ ನಿಯಂತ್ರಣಕ್ಕೆ ರಾಸಾಯನಿಕ ಕ್ರಿಮಿನಾಶಗಳನ್ನು ಬಳಸದೆ ತಾವೇ ಅತೀ ಕಡಿಮೆ ಖರ್ಚಿನಲ್ಲಿ ತಯಾರಿಸಿದ ಔಷಧಗಳನ್ನು ಬಳಸಿ ಪರಿಣಾಮಕಾರಿಯಾಗಿ ರೋಗ ನಿಯಂತ್ರಣ ಮಾಡುತ್ತಾರೆ.

ರೇವಣಸಿದ್ಧೇಶ್ವರ ಸ್ವಾಮೀಜಿ ಎರಡು ವಿಧಾನದಲ್ಲಿ ಕ್ರಿಮಿನಾಶಕ ಔಷಧಗಳನ್ನು ತಯಾರಿಸುತ್ತಾರೆ:
ಮೊದಲ ವಿಧಾನ: ಒಂದು ತಿಂಗಳವರೆಗೆ ದೇಶೀ ಆಕಳ ಮಜ್ಜಿಗೆಯನ್ನು ಸಂಗ್ರಹಿಸಿ ಇಡಬೇಕು. ಒಂದು ತಿಂಗಳ ನಂತರ ಮಜ್ಜಿಗೆ ಚೆನ್ನಾಗಿ ಹುಳಿ ಬರುತ್ತದೆ. ಆಮೇಲೆ 18 ಲೀಟರ್‌ಗೆ ನೀರಿಗೆ ಎರಡು ಲೀಟರ್ ಹುಳಿ ಮಜ್ಜಿಗೆ ಸೇರಿಸಿ ರೋಗ ಪೀಡಿತ ಬೆಳೆಗಳಿಗೆ ಸಿಂಪರಣೆ ಮಾಡಬೇಕು.

ಎರಡನೇ ವಿಧಾನ: ಹಸಿಮೆಣಸಿನಕಾಯಿ ಹಾಗೂ ಬೇವಿನಸೊಪ್ಪನ್ನು ಚೆನ್ನಾಗಿ ಅರೆದು 18 ಲೀಟರ್ ನೀರಿಗೆ 1ಲೀಟರ್ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಕಿ ಸಿಂಪರಣೆ ಮಾಡಬೇಕು. ಹೀಗೆ ಮಾಡುವುದರಿಂದ ಬೆಳೆಗಳಿಗೆ ಯಾವುದೇ ಕೀಟಬಾಧೆ ಬರುವುದಿಲ್ಲ. ಅಲ್ಲದೆ ರೈತರು ಇದಕ್ಕಾಗಿ ಹೆಚ್ಚು ದುಡ್ಡು ಖರ್ಚು ಮಾಡುವ ಅಗತ್ಯವೂ ಇಲ್ಲ. `ಎಲ್ಲರಂತೆ ಮೊದಲು ನಾವೂ ಕ್ರಿಮಿನಾಶಕಗಳನ್ನೇ ಬಳಸುತ್ತಿದ್ದೆವು. ಒಂದೊಂದು ಸಲ 40-50 ಸಾವಿರ ರೂಪಾಯಿಗಳನ್ನು ಕೇವಲ ಕೀಟಗಳ ಬಾಧೆ ತಡೆಗಟ್ಟಲು ಖರ್ಚು ಮಾಡಬೇಕಾಗುತ್ತಿತ್ತು.

ಆದರೂ ರೋಗ ಹತೋಟಿ ಸರಿಯಾಗಿ ಆಗುತ್ತಿರಲಿಲ್ಲ. ಹೀಗಾಗಿ ಸಾವಯವ ಪದ್ಧತಿಯಲ್ಲಿ ಕ್ರಿಮಿನಾಶಕ ಔಷಧ ತಯಾರಿಸುವ ವಿಧಾನವನ್ನು ತಿಳಿದುಕೊಂಡು ಅದೇ ಮಾದರಿಯಲ್ಲಿ ಔಷಧ ತಯಾರಿಸಿ ಬಳಸುತ್ತಿದ್ದೇವೆ. ಇದರಿಂದಾಗಿ ನಮಗೆ ಸಾಕಷ್ಟು ಹಣದ ಉಳಿತಾಯವಾಗಿದೆ. ಅಲ್ಲದೆ ಇದು ಪರಿಸರಸ್ನೇಹಿ ಔಷಧವಾಗಿದ್ದು ಯಾವುದೇ ಪ್ರಾಣಿ ಪಕ್ಷಿಗಳಿಗೆ ಪ್ರಾಣಾಪಾಯ ಉಂಟು ಮಾಡುವುದಿಲ್ಲ’ ಎಂದು ರೇವಣಸಿದ್ಧೇಶ್ವರ ಸ್ವಾಮಿಗಳು ತಿಳಿಸುತ್ತಾರೆ. ಇವರಂತೆಯೇ ಉಳಿದ ಮಠಾಧೀಶರು ಕೃಷಿ ಕಾಯಕದಲ್ಲಿ ತೊಡಗಿದರೆ ಅವರು ಇತರೇ ರೈತರಿಗೆ ಮಾದರಿಯಾಗಬಲ್ಲರು. ಸಂಪರ್ಕಕ್ಕೆ- 94480 27458.
-ನಾಗರಾಜ ಎಸ್.ಎಚ್.

ಲಾಭಕ್ಕೆ ಅಣಿ ಮಾಡುವ ಅಣಬೆ

ಪುರವಣಿ›ಕೃಷಿ

ಲಾಭಕ್ಕೆ ಅಣಿ ಮಾಡುವ ಅಣಬೆ

 
  •  226 reads
  • Tue, 08/27/2013 – 01:00
 

ಗುಲಾಬಿ ಅಣಬೆ

ಮಳೆಯ ಸಿಂಚನ ಇಳೆಯನ್ನು ಸ್ಪರ್ಶಿಸುತ್ತಿದ್ದಂತೆ, ಭೂಗರ್ಭದಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸುವ ಬೆಳೆ ಎಂದರೆ ಅಣಬೆ. ಇದು ನಿಸರ್ಗದ ಚಮತ್ಕಾರವಾದರೂ ಈ ಪೈಕಿ ಬಹಳಷ್ಟು ಅಣಬೆಗಳು ವಿಷಪೂರಕವಾದವು. ಆದರೆ ಮನೆ ಬಳಕೆಗೆ ಉಪಯೋಗ ಆಗುವಂತಹ ಅಣಬೆಯನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆದು ಅದರಿಂದ ಲಾಭ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಅಣಬೆ ಸಂಶೋಧನಾ ಪ್ರಯೋಗಾಲಯದ ಪ್ರಧಾನ ವಿಜ್ಞಾನಿ ಡಾ.ಮೀರಾ ಪಾಂಡೆ.

ಉಪ್ಪಿನ ಕಾಯಿ, ಸೂಪ್, ಚಟ್ನಿ ಪುಡಿಗಳು, ಪಾನೀಯಗಳು, ಔಷಧ ಹೀಗೆ ಎಲ್ಲದಕ್ಕೂ ಸೈ ಎನಿಸಿರುವ ಅಣಬೆಯನ್ನು ಅನುಪಯುಕ್ತ ಸಾವಯವ ತ್ಯಾಜ್ಯಗಳಿಂದಲೇ ಹೆಚ್ಚಿನ ಬಂಡವಾಳವಿಲ್ಲದೆಯೇ ಬೆಳೆಯಬಹುದು ಎನ್ನುತ್ತಾರೆ ಮೀರಾ. `ಹಣ್ಣು ಮತ್ತು ತರಕಾರಿಗಳಿಗೆ ಹೋಲಿಸಿದರೆ ಅಣಬೆಯಲ್ಲಿ ಹೆಚ್ಚಿನ ಪ್ರೋಟಿನ್ ಅಂಶ ಇದೆ. ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಬಿ2, ವಿಟಮಿನ್ ಡಿ ಜೀವಸತ್ವ ಹೇರಳವಾಗಿದೆ. ಕಬ್ಬಿಣಾಂಶದ ಪ್ರಮಾಣ ಕೂಡ ತರಕಾರಿ ಮತ್ತು ಮಾಂಸಕ್ಕೆ ಹೋಲಿಸಿದರೆ ಅಣಬೆಯಲ್ಲಿ ಅಧಿಕ ಪ್ರಮಾಣದಲ್ಲಿದೆ. ಜತೆಗೆ ಕೊಬ್ಬು, ಸಕ್ಕರೆ ಮತ್ತು ಕ್ಯಾಲೊರಿ ಅಂಶಗಳು ಕಡಿಮೆ ಪ್ರಮಾಣದಲ್ಲಿರುವುದರಿಂದ ಇದು ಮಧುಮೇಹ ಹಾಗೂ ಹೃದ್ರೋಗಿಗಳಿಗೆ ಉತ್ತಮ ಆಹಾರ’ ಎನ್ನುವುದು ಅವರ ಅಭಿಮತ.

ಉದ್ಯೋಗ ಸಂಖ್ಯೆ ಹೆಚ್ಚಳ
ಭಾರತದಲ್ಲಿ ಪ್ರತಿ ವರ್ಷ 1.44 ಕೋಟಿ ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದನ್ನು ಸುಡಲಾಗುತ್ತಿದೆ ಇಲ್ಲವೇ ಪರಿಸರದಲ್ಲಿ ಕೊಳೆಯಲು ಬಿಡುವ ಮೂಲಕ ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ. ಇದರಲ್ಲಿ ಶೇ 10ರಷ್ಟು ಅಂದರೆ 14.4 ಲಕ್ಷ ಟನ್ ಕೃಷಿ ತ್ಯಾಜ್ಯವನ್ನು ಸದುಪಯೋಗ ಮಾಡಿಕೊಂಡರೆ ಸುಮಾರು 72 ಲಕ್ಷ ಟನ್ ಅಣಬೆಯನ್ನು ಉತ್ಪಾದಿಸಬಹುದು. ಇದು 1.44 ಟನ್ ಪ್ರೋಟಿನ್ ಉತ್ಪಾದನೆಗೆ ಸಮವಾಗಿದೆ. ಇಷ್ಟು ಪ್ರಮಾಣದ ಅಣಬೆ ಬೇಸಾಯ 43 ಲಕ್ಷ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಒದಗಿಸುತ್ತದೆ.

ಒಳಾಂಗಣ ಕೃಷಿಯಾಗಿರುವ ಅಣಬೆ ಬೇಸಾಯಕ್ಕೆ ಹೆಚ್ಚಿನ ಕೆಲಸಗಾರರ ಅಗತ್ಯವಿದ್ದು, ಭಾರತದಂತಹ ದೇಶದಲ್ಲಿ ಅಣಬೆ ಬೇಸಾಯ ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಬಲ್ಲದು. ಈ ನಿಟ್ಟಿನಲ್ಲಿ ಸರ್ಕಾರಗಳು ಅಣಬೆ ಬೇಸಾಯವನ್ನು ರಾಷ್ಟ್ರೀಯ ಉದ್ಯೋಗ ಖಾತ್ರಿಯಂತಹ ಯೋಜನೆಗಳಲ್ಲಿ ಸೇರಿಸುವ ಮೂಲಕ ಉತ್ತೇಜನ ನೀಡುವ ಜತೆಗೆ ಅಣಬೆ ಉತ್ಪನ್ನಗಳನ್ನು ಸರ್ಕಾರಿ ಮಳಿಗೆಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಬಹುದು ಎನ್ನುವುದು ತಜ್ಞರ ಅಭಿಮತ.

ಸದ್ಯಕ್ಕೆ ಬೆಂಗಳೂರು ನಗರವೊಂದರಲ್ಲಿ ದಿನಕ್ಕೆ 5 ಟನ್ ಅಣಬೆ ಬೇಡಿಕೆಯಿದೆ. ಆದರೆ ಪೂರೈಕೆಯಾಗುತ್ತಿರುವುದು ಒಂದು ಟನ್ ಮಾತ್ರ. ಈ ಅಂಕಿ ಅಂಶವೇ ಅಣಬೆಯ ಮಹತ್ವ ಸಾರುತ್ತದೆ.  ಬೀಜ ಉತ್ಪಾದನೆ, ಬೇಸಾಯಕ್ಕೆ ಬೇಕಾಗುವ ಪರಿಕರಗಳಾದ ಭತ್ತದ ಹುಲ್ಲು, ಪಾಶ್ಚರೀಕರಿಸಿದ ಮಣ್ಣಿನ ಪೂರೈಕೆ, ನಿರ್ಜಲೀಕರಣ, ಮೌಲ್ಯವರ್ಧಿತ ಪದಾರ್ಥಗಳ ಉತ್ಪಾದನೆ, ಶೀತಲ ಗೃಹಗಳ ನಿರ್ವಹಣೆ, ಆಹಾರೋದ್ಯಮ, ಒಣ ಅಣಬೆ ತಯಾರಿಕೆ ಹೀಗೆ ಬೇಸಾಯವನ್ನು ಹೊರತುಪಡಿಸಿಯೂ ಹತ್ತು ಹಲವು ಉದ್ಯೋಗಗಳಿಗೆ ಇದು ಅವಕಾಶ ಒದಗಿಸುತ್ತದೆ.

ಈ ನಿಟ್ಟಿನಲ್ಲಿ ವರ್ಷದಲ್ಲಿ ಮೂರು ಬಾರಿ ಐಐಎಚ್‌ಆರ್ ಸಂಸ್ಥೆಯು ಅಣಬೆ ಬೀಜ ಉತ್ಪಾದನೆ ಮತ್ತು ಬೇಸಾಯ ಕುರಿತ ತರಬೇತಿಗಳನ್ನು ನಡೆಸುತ್ತ ಬರುತ್ತಿದೆ. ಎರಡು ವರ್ಷಗಳಲ್ಲಿ ಹೆಸರಘಟ್ಟ ಸುತ್ತಮುತ್ತಲಿನ ಹಳ್ಳಿಗಳ ಸುಮಾರು 3 ಸಾವಿರ ಮಹಿಳೆಯರಿಗೆ `ರೆಡಿ-ಟು-ಫ್ರೂಟ್’ ಬ್ಯಾಗ್‌ಗಳನ್ನೂ ವಿತರಿಸಿ, ಈ ಮೂಲಕ ಅಣಬೆ ಬಹುಪಯೋಗ ಕುರಿತು ಅರಿವು ಮೂಡಿಸುತ್ತಿದೆ. ಸಂಪರ್ಕಕ್ಕೆ: 080- 28466420 /347

`ರೆಡಿ-ಟು-ಫ್ರೂಟ್’ ಬ್ಯಾಗ್
ಎಲ್ಲ ಮಾರುಕಟ್ಟೆಗಳಲ್ಲಿ ತಾಜಾ ಅಣಬೆ ಸಿಗುತ್ತದೆ ಎನ್ನುವುದು ಖಾತ್ರಿಯಿಲ್ಲ. ಆದರಿಂದ ಮನೆಯಲ್ಲಿಯೇ ತಾಜಾ ಅಣಬೆ ಬೆಳೆದುಕೊಳ್ಳಲಿ ಎಂಬ ಆಶಯದೊಂದಿಗೆ ಐಐಎಚ್‌ಆರ್‌ನ ವಿಜ್ಞಾನಿಗಳು `ರೆಡಿ-ಟು-ಫ್ರೂಟ್’ ಎಂಬ ಅಣಬೆ ಬ್ಯಾಗ್‌ಗಳನ್ನು ಸಿದ್ಧಪಡಿಸಿದ್ದಾರೆ. ಒಂದು ಕೆ.ಜಿ ತೂಕದ ಈ ಬ್ಯಾಗ್‌ಗಳನ್ನು ಮನೆಯಲ್ಲಿ ನೆರಳಿರುವ ಖಾಲಿ ಸ್ಥಳಗಳಲ್ಲಿ ಇಟ್ಟು ಅಥವಾ ನೇತು ಹಾಕಿ ಸ್ವಲ್ಪ ನೀರು ಚಿಮುಕಿಸಿದರೆ ಸಾಕು, ವಾರದೊಳಗೆ ತಾಜಾ ಅಣಬೆ ಸಿದ್ಧವಾಗುತ್ತದೆ. ಅದನ್ನು ಕತ್ತರಿಸಿ ಮತ್ತೆ ನೀರು ಚಿಮುಕಿಸಿದರೆ ವಾರದೊಳಗೆ ಮತ್ತೊಂದು ಬೆಳೆ ಸಿದ್ಧವಾಗಿರುತ್ತದೆ. ಒಂದು ಬ್ಯಾಗ್‌ನಿಂದ ಎರಡು ಬೆಳೆ ಸೇರಿ 200-250 ಗ್ರಾಂ ತಾಜಾ ಅಣಬೆ ಪಡೆಯಬಹುದು. ಇದಕ್ಕೆ ತಗಲುವ ವೆಚ್ಚ 10 ರೂಪಾಯಿ! ಈ ಬ್ಯಾಗ್‌ಗಳನ್ನು ಮಹಿಳೆಯರೇ ಸಿದ್ಧಪಡಿಸಿ ಅಣಬೆ ಬೆಳೆದು ಮಾರಾಟ ಮಾಡಿಯೂ ಹಣ ಗಳಿಸಬಹುದು.

ಅಣಬೆ ಬೇಸಾಯ ಸಲೀಸುಗೊಳಿಸುವ `ರೆಡಿ-ಟು-ಫ್ರೂಟ್ ಚೀಲ
ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ