ಪುರವಣಿ› ಕರ್ನಾಟಕ ದರ್ಶನ ಪರಿಸರ ಪಾದಯಾತ್ರೆ ಶಿವಾನಂದ ಕಳವೆ Tue, 01/28/2014 – 01:00

ಕುಂದಾಪುರ ಸಮೀಪದ ಮರವಂತೆಯ ಸೌಪರ್ಣಿಕಾ ನದಿ ದಂಡೆಯ ವರಾಹ ದೇಗುಲದ ಎದುರು ನಿಂತಿದ್ದೆ. ನದಿಯ ಆಚೆ ದ್ವೀಪ ಗ್ರಾಮಗಳಿವೆ, ದೋಣಿಯಲ್ಲಿ ಹೋಗಬೇಕು. ಅಜ್ಜಿ ಮೀನು ಬುಟ್ಟಿ ಹೊತ್ತು ತಾರಿಯ ಸನಿಹ ಬಂದಿದ್ದಳು. ಆಚೆ ದಡಕ್ಕೆ ಹೋದ ದೋಣಿ ಬರುವವರೆಗೆ ಅವಳು ಕಾಯಬೇಕು. ಬುಟ್ಟಿ ಇಳಿಸಿ ತುದಿಗಾಲಲ್ಲಿ ಕುಳಿತಳು. ಆ ಕ್ಷಣಕ್ಕೆ  ಎಲ್ಲಿಂದಲೋ ನುಸುಳಿ ಬಂದ ಬೆಕ್ಕು ಅಜ್ಜಿಯ ಎದುರು ಕುಳಿತು ಮಿಯಾವ್ ಎಂದು ಬಾಯ್ತೆರೆಯಿತು. ದೃಶ್ಯ ನೋಡಿದರೆ ಅಜ್ಜಿಯ ಜೊತೆ ಏನೋ ಕಷ್ಟಸುಖದ ಆಪ್ತ ಮಾತುಕತೆ ಆರಂಭಿಸಿದಂತೆ ಕಾಣುತ್ತಿತ್ತು. ಬೆಕ್ಕು ಏನು ಹೇಳುತ್ತಿದೆ? ಅಜ್ಜಿಯಲ್ಲಿ ವಿಚಾರಿಸಿದೆ. ‘ಇದು ದಿನವೂ ಮಾತಾಡ್ತದೆ, ಅದಕ್ಕೆ ಏನು ಬೇಕೆಂದು ನನಗೆ  ಗೊತ್ತಿದೆ’ ಎಂದು  ಬೊಚ್ಚು ಬಾಯ್ತೆರೆದು ನಕ್ಕಳು. ಬುಟ್ಟಿಯಿಂದ ಒಂದು ಹಸಿಮೀನು ಎತ್ತಿ ಎಸೆದಳು. ಬೆಕ್ಕು ಮೀನು ತಿನ್ನಲು ಆರಂಭಿಸಿತು.

ಬೆಕ್ಕಿನ ಸಂಭ್ರಮ ತೆಂಗಿನ ಮರದಲ್ಲಿ ಕುಳಿತ ಕಾಗೆಗೆ ಕಾಣಿಸಿರಬೇಕು. ಇಲ್ಲವೇ ಅಜ್ಜಿಯ ಗುಣ ಒಂಟಿ ಕಾಗೆಗೂ ತಿಳಿದಿರಬೇಕು! ಅಜ್ಜಿಯ ಸನಿಹ ಕಾಗೆಯೂ ಬಂದು ಕುಳಿತಿತು.  ‘ಇವೆಲ್ಲ ನನ್ನ ಕಾಯಂ ಗಿರಾಕಿಗಳು’ ಎಂದು ಮನೆ ಮಕ್ಕಳ ಅಕ್ಕರೆಯಲ್ಲಿ ಮತ್ತೊಂದು ಮೀನೆಸೆದಳು, ಕಾಗೆಗೂ ಖುಷಿ. ಬಡ ವೃದ್ಧೆ ಮೀನು ಮಾರುತ್ತ ಊರುಕೇರಿ ತಿರುಗುತ್ತ ಬದುಕು ಸಾಗಿಸುತ್ತಾಳೆ. ದೋಣಿ ಬಂತು, ಎದ್ದು ನದಿಯತ್ತ ಸಾಗಿದಳು. ಅಜ್ಜಿ ಆ ಬೆಕ್ಕು ಹಾಗೂ ಕಾಗೆಯ ಜೊತೆ ಕ್ಷಣದಲ್ಲಿ ಕಟ್ಟಿದ ಮಧುರ ಚಿತ್ರಗಳು ಈಗಲೂ ಕಾಡುತ್ತಿವೆ. ಸುತ್ತಲಿನ ಜೀವಲೋಕದ ಜೊತೆ ಸಂಬಂಧಗಳನ್ನು ಬೆಸೆಯುವ ಪರಿ ಮನಸ್ಸು ಆವರಿಸಿತು.

ನದಿಯ ಆ ಮೀನುಗಳು ಅವರ ಮಧ್ಯೆ ಸಂಬಂಧದ ಸೇತುವೆಗಳು. ರವಿ, ಶಿರಸಿಯ ಬಸ್ ನಿಲ್ದಾಣದ ಸನಿಹ ಅಕ್ಕಿಯ ವ್ಯಾಪಾರಕ್ಕೆ ಪುಟ್ಟ ಅಂಗಡಿ ನಡೆಸುತ್ತಾರೆ. ಅಂಗಡಿ ಬಾಗಿಲಲ್ಲಿ ಅಕ್ಕಿ ಚೀಲದ ಬಾಯ್ತೆರೆದಿಟ್ಟು ಗಿರಾಕಿಗಳನ್ನು ಸೆಳೆಯುತ್ತಾರೆ. ಬೆಳಗಿನಿಂದ ಸಂಜೆಯವರೆಗೆ ಅಕ್ಕಿ ಖರೀದಿಗೆ ಜನ ಬರುತ್ತಿರುತ್ತಾರೆ. ನಿತ್ಯ ತಪ್ಪದೇ ಸಂಜೆ ಐದು ಗಂಟೆಯ ಸುಮಾರಿಗೆ ಒಂದಿಷ್ಟು ಗಿರಾಕಿಗಳು ಸೇರುತ್ತಾರೆ.

ದಿನದ ಸುತ್ತಾಟ ಮುಗಿಸಿ ಗೂಡಿಗೆ ಹೋಗುವ ನೂರಾರು ಗುಬ್ಬಿಗಳು ಅಂಗಡಿ ಎದುರು ಸುಳಿಯುತ್ತವೆ. ವಿದ್ಯುತ್ ತಂತಿಯ ಮೇಲೆ ಸಾಲಿನಲ್ಲಿ ಕುಳಿತು  ಒಳ ನುಗ್ಗಲು ಕಾಯುತ್ತವೆ.  ಗಿರಾಕಿಗಳಿಲ್ಲದ ಸಮಯ ನೋಡಿಕೊಂಡು ಸರ್ರನೆ ಬಂದು ತೆರೆದಿಟ್ಟ ಚೀಲದ ಅಕ್ಕಿ ತಿನ್ನುತ್ತ ಸಂಭ್ರಮಿಸುತ್ತವೆ. ರವಿ  ಕೈ ಬೀಸಿ ಗುಬ್ಬಿ ಓಡಿಸದೇ ಕುರ್ಚಿಯಲ್ಲಿ ತೆಪ್ಪಗೆ ಕುಳಿತಿರುತ್ತಾರೆ. ಕಾಸು ಕೊಡದ ‘ಗಿರಾಕಿ’ಗಳು ಕಾಳು ಎತ್ತಿ ಸಲೀಸಾಗಿ ಒಯ್ಯುವುದನ್ನು ನೋಡಿ ಖುಷಿ ಪಡುತ್ತಾರೆ.

ಗುಬ್ಬಿಗಳ ಸಂತತಿ ಕಡಿಮೆಯಾಗಿದೆ,  ಪುಟ್ಟ ಹಕ್ಕಿಗಳು ನನ್ನ ಅಂಗಡಿಯ ಎಷ್ಟು ಅಕ್ಕಿ ತಿಂದಾವು? ನಿತ್ಯ ಅವು ಬಂದು ಹೋಗುವ ಖುಷಿ ನನಗಿದೆ’ ಎನ್ನುತ್ತಾರೆ ಅವರು. ಇವರೇನು ಅಳಿಯುತ್ತಿರುವ ಗುಬ್ಬಿ ಸಂತತಿ ಉಳಿಸಲು ಭಾಷಣ ಬಿಗಿಯುವ ನೇತಾರರಲ್ಲ. ಸುತ್ತಲಿನ ಜೀವಿಗಳ ಸಂರಕ್ಷಣೆಯ ಕಾಳಜಿಯನ್ನು ಸುಪ್ತವಾಗಿ ಎದೆಯಲ್ಲಿಟ್ಟುಕೊಂಡು ಅಕ್ಕಿ ವ್ಯವಹಾರದ ನಡುವೆ ಪುಟ್ಟ ಪಕ್ಷಿಯ ಬಗ್ಗೆ ಚಿಕ್ಕ ಕಾಳಜಿ ತೋರಿಸುತ್ತಾರೆ ಅಷ್ಟೇ !

ಇನ್ನು, ಕನಕಪ್ಪ ಕಂಚಿ ಕೊರವರ್ ಅವರ ಸಹಕಾರ ಕುತೂಹಲಕರವಾದ್ದು. ಜೀರ್ಣಾವಸ್ಥೆಗೆ ತಲುಪಿದ ಒಂದು ಹಳೆಯ ಎಮ್-೮೦ ವಾಹನದಲ್ಲಿ ನಾಲ್ಕು ಮಂದಿಯನ್ನು ಹೇರಿಕೊಂಡು, ಜೊತೆಯಲ್ಲಿ ತಿರುಗುಣಿಯಂತಹ ಹಗ್ಗ ಹೊಸೆಯುವ ಕೈ ಚಾಲಿತಯಂತ್ರ ಹಿಡಿದುಕೊಂಡು ತಿರುಗುತ್ತಾರೆ. ಹಳೆಯ ಸೀರೆಗಳಿಂದ ಹಗ್ಗ ತಯಾರಿಸುವುದು ಇವರ ಕೆಲಸ. ಪರ್ರನೆ ಉದ್ದಕ್ಕೆ ಸೀರೆ ಸಿಗಿದು ಕ್ಷಣಾರ್ಧದಲ್ಲಿ ಕೃಷಿಕರಿಗೆ ಉಪಯುಕ್ತವಾದ ನಾರುಮಿಣಿ, ಹಗ್ಗ, ದಾಬು ಹೊಸೆಯುತ್ತಾರೆ.

ಚೆಲುವೆಯರ ಸೀರೆ ಸೆರಗುಗಳೆಲ್ಲ ಹಾವಿನಂತೆ ಹಗ್ಗವಾಗಿ ಬೇಸಾಯಕ್ಕೆ ಬಳಕೆಯಾಗುತ್ತವೆ. ದೈತ್ಯ ಕುಲದೆತ್ತು ಹಿಡಿದು ನಿಲ್ಲಿಸುವ ಸೂತ್ರಗಳಾಗುತ್ತವೆ. ನೂರಾರು ರೂಪಾಯಿ ತೆತ್ತು ಪೇಟೆಯಿಂದ ನೈಲಾನ್ ಹಗ್ಗ ತರಬೇಕಾಗಿಲ್ಲ, ಹಳೆ ಸೀರೆಯಲ್ಲಿ ಅಗ್ಗದ ಬೆಲೆಗೆ ಹಗ್ಗ ಮನೆ ಬಾಗಿಲಲ್ಲಿ ದೊರೆಯುತ್ತದೆ.

‘ನಮ್ ಕಮತಕ್ಕೆ ಬೇಕಾದ ಕಸುಬು ಅಂದ್ರೆ ಹಿಂಗ್ ಇರ್ಬೇಕ್ ನೋಡ್ರಿ!’ ಲಕ್ಷ್ಮೇಶ್ವರದ ಎತ್ತಿನಹಳ್ಳಿಯ ಕೃಷಿಕರು ಕನಕಪ್ಪನ ಕಾಯಕಕ್ಕೆ ಖುಷಿ ಪಡುತ್ತಾರೆ. ಕಡಕ್ ಮುರಿಯ ಬಣ್ಣ ಬಣ್ಣದ ಹಗ್ಗ ಮುಟ್ಟಿ ಮುಟ್ಟಿ ಮೆಚ್ಚಿ ಮಾತಾಡುತ್ತಾರೆ. ಹಳೆಯ ನೈಲಾನ್ ಸೀರೆಗಳು ಹೊಸ ಉಪಯೋಗಕ್ಕೆ ಬಂದ ಸುದ್ದಿ ತಿಳಿದ ಗಂಡಸರಂತೂ ಪೆಟ್ಟಿಗೆ ಮೂಲೆಯಲ್ಲಿದ್ದ ಹೆಂಡತಿಯ ಹಳೆಸೀರೆಗಳನ್ನು ಹುಡುಕಲು ಹೊರಡುತ್ತಾರೆ.

ಚಕ್ಕಡಿಯಲ್ಲಿ ಕೃಷಿ ಉತ್ಪನ್ನ ಸಾಗಿಸುತ್ತಿದ್ದವರು, ಹತ್ತಿ ಅಂಡಿಗೆಗಳನ್ನು ಟ್ರ್ಯಾಕ್ಟರ್‌ಗೆ ಹೇರುವವರು ಅಗತ್ಯಕ್ಕೆ ತಕ್ಕ ಹಗ್ಗ ಮಾಡಿಸುತ್ತಾರೆ. ಕನಕಪ್ಪ ಗದಗದವರು. ಶಾಲೆಗೆ ಹೋಗಿ ಓದಿದವರಲ್ಲ, ಕತ್ತಾಳೆ ನಾರಿನಲ್ಲಿ ಹಗ್ಗ ಹೊಸೆಯುತ್ತಿದ್ದ ಕುಲಕಸುಬು ನಂಬಿದವರು. ಇವರು ಯಾವತ್ತೂ ಒಂದೇ ಕೆಲಸ ನಂಬಿ ಬದುಕುವುದಿಲ್ಲ, ಜೀವನಕ್ಕೆ ಹಲವು ಕಸುಬು ಕಲಿತಿದ್ದಾರೆ. ಒಂದಿಷ್ಟು ಕಾಲ ಹಣ್ಣು ಮಾರುವ  ಕನಕಪ್ಪ ಕೆಲವು ದಿನ ಮಾರುಕಟ್ಟೆ­ಯಲ್ಲಿ ಹೂ ಹಿಡಿದು ನಿಲ್ಲುತ್ತಾರೆ. ಕೆಲವೊಮ್ಮೆ ಹಳೆಯ ಯಂತ್ರದ ದೂಳು ಕೊಡವಿ ಹಗ್ಗ ಹೊಸೆಯಲು ಹೊರಡುತ್ತಾರೆ. ಹಳೆ ಸೀರೆಗಳನ್ನು ಪಡೆದು ಉಪಯುಕ್ತ ಹಗ್ಗ ನೀಡುತ್ತಾರೆ.

ಕಾಗೆಗಳಿಗೆ ಊಟ ಬಡಿಸುವವರು, ಮನೆಯ ಅಂಗಳದಲ್ಲಿ ನೀರಿಟ್ಟು ಪಕ್ಷಿಗಳಿಗೆ ನೆರವಾಗುವವರನ್ನು ನೀವು ನೋಡಿರಬಹುದು. ಬೀಡಾಡಿ ದನಕರುಗಳಿಗೆ ನಿಗದಿತ ಸಮಯಕ್ಕೆ ಮನೆ ಬಾಗಿಲಲ್ಲಿ ಆಹಾರ  ನೀಡುವ ನೀರೆಯರು ನಗರದಲ್ಲಿ ಹಲವರು ಸಿಗುತ್ತಾರೆ. ಕಾಂಕ್ರೀಟ್ ಬದುಕಿನ ಏಕತಾನತೆಯಲ್ಲಿ ಪ್ರಾಣಿಗಳ ಜೊತೆ ಇಟ್ಟುಕೊಂಡ ಇಂಥ ಸಂಬಂಧಗಳು ಎಂಥದೋ ನೆಮ್ಮದಿ ನೀಡುತ್ತವೆ.

ಕರಾವಳಿಯ ನದಿ ತೀರಗಳಲ್ಲಿ ದೋಣಿ ನಡೆಸುವ ಅಂಬಿಗ ಅಜ್ಜಂದಿರು ತಮ್ಮ ಜೀವಮಾನದಲ್ಲಿ ಶಾಲೆಗೆ ಹೋಗುವ ನೂರಾರು ಮಕ್ಕಳನ್ನು ಪುಕ್ಕಟೆಯಾಗಿ ನಿತ್ಯವೂ ಕರೆದೊಯ್ದಿದ್ದಾರೆ. ಶಾಲೆ ಮಕ್ಕಳಿಗೆ ನದಿ ದಾಟಲು ನೆರವಾದ ಇವರ ಕೊಡುಗೆಗೆ ಸಮಾಜಸೇವೆಯ ಮನ್ನಣೆ ದೊರೆಯುವುದಿಲ್ಲ. ಪಾತಿ ದೋಣಿಯಲ್ಲಿ ಸುರಕ್ಷಿತವಾಗಿ ದಡ ದಾಟಿದವರಿಗೂ ಅಂಬಿಗ ಮರೆತು ಹೋಗುತ್ತಾನೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯ ಹಳವಳ್ಳಿಗೆ ಶಿರಸಿಯ ಮತ್ತಿಘಟ್ಟ ಮೂಲಕ ಕಾಡು ರಸ್ತೆಯಿದೆ. ಅಲ್ಲಿ ಕಮ್ಮಾಣಿ ಹಳ್ಳ ಹರಿಯುತ್ತಿದೆ. ನೀರು ಕಡಿಮೆಯಿದೆ ಎಂದು ಒಮ್ಮೆ ಹಳ್ಳದಲ್ಲಿ ಬೈಕ್ ದಾಟಿಸಲು ಹೋಗಿ ಒದ್ದಾಡುತ್ತಿದ್ದೆವು. ಬೈಕಿನ ಸಪ್ಪಳ ಕೇಳಿ ನಾಗಪ್ಪ ಸಿದ್ದಿ ಓಡೋಡಿ ಬಂದರು. ಸೈಲೆನ್ಸರ್‌ನಲ್ಲಿ ನೀರು ಒಳ ಸೇರಿದರೆ ಚಾಲೂ ಆಗೋದಿಲ್ಲ ಎನ್ನುತ್ತ ಬೈಕನ್ನು ದಡಕ್ಕೆ ಮರಳಿ ತಂದರು. ಸೈಲೆನ್ಸರ್ ಕೊಳವೆಗೆ ಬಟ್ಟೆ ತುರುಕಿ, ಪಾಲಿಥೀನ್ ಚೀಲ ಕಟ್ಟಿ ನೀರು ಸೇರದಂತೆ ಪ್ಯಾಕ್ ಮಾಡಿದರು.

ಬೈಕನ್ನು ನೀರಿಗಿಳಿಸಿ ಸುರಕ್ಷಿತವಾಗಿ ಹಳ್ಳ ದಾಟಿಸಿದರು. ವಿಚಾರಿಸಿದರೆ ನಿತ್ಯವೂ ಹಳ್ಳದ ದಂಡೆಯ ಇವರಿಗೆ ಇದು ಮಾಮೂಲಿ ಕೆಲಸ. ನೀರಿನ ಸೆಳವು ಹೆಚ್ಚಿರುವ ಇಲ್ಲಿ ಇವರ ನೆರವಿಲ್ಲದೇ ದಡ ದಾಟಲಾಗುವುದಿಲ್ಲ. ಒಂದಿಷ್ಟು ಪಾಲಿಥೀನ್ ಚೀಲ, ಬಟ್ಟೆ ಇಟ್ಟುಕೊಂಡು ನಾಗಪ್ಪ ಮಾಡುವ ಕಾರ್ಯ ಮಹತ್ವದ್ದು.  ಒಮ್ಮೆ ಇವರು ಹಳ್ಳ ದಾಟಿಸದಿದ್ದರೆ? ಆರು ಕಿಲೋ ಮೀಟರ್ ಸನಿಹದ ಹಳವಳ್ಳಿಗೆ ೫೦ಕಿಲೋ ಮೀಟರ್ ಸುತ್ತು ಬಳಸಿ ಹೋಗಬೇಕಾಗುತ್ತದೆ, ಅಷ್ಟು ಇಂಧನ ಸುಡಬೇಕಾಗುತ್ತದೆ.

ಭಾಷಣ, ವಿಚಾರ ಸಂಕಿರಣ, ಗೋಷ್ಠಿ, ಆಂದೋಲನ, ಕಟ್ಟೆಗಳಲ್ಲಿ  ಕೂತು ಪರಿಸರದ ಕಾಳಜಿಯ ಮಾತನಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯ.  ಶಿರಸಿಯ ಬಸ್ ನಿಲ್ದಾಣದ ಸನಿಹ ಅಕ್ಕಿಯ ವ್ಯಾಪಾರಕ್ಕೆ ಕೂತು ಪುಟ್ಟ ಹಕ್ಕಿಯ ಪುಟ್ಟ ಹೊಟ್ಟೆ ತುಂಬಿಸುವ ರವಿಯ ಪಕ್ಷಿ ಪ್ರೀತಿ,  ಹಳೆ ಸೀರೆಯಿಂದ ಹಗ್ಗ ಹೊಸೆಯುವ ಕನಕಪ್ಪನ ಮರುಬಳಕೆಯ ನೀತಿ, ಸುಲಭವಾಗಿ ದಡ ದಾಟಿಸುವ ಕಮ್ಮಾಣಿಯ ನಾಗಪ್ಪ ಸಿದ್ದಿಯ ಇಂಧನ ಉಳಿತಾಯದ ನೆರವು  ಇವೆಲ್ಲ ಪ್ರಚಾರ ಬೇಡುವುದಿಲ್ಲ.

ಬಡವರ ಬದುಕಿನ ಸಹಜ ನಡೆಗಳು ಇವು.  ಮಾತಿನಲ್ಲೇ ಮಂಟಪ ಕಟ್ಟುವ ಮುಖವಾಡಕ್ಕಿಂತ  ಮೌನದಲ್ಲೇ ಪರಿಸರ ರಕ್ಷಣೆ ಮಾಡುತ್ತಿರುವ ಈ ಬಗೆಯ ಜನರ ಮೌನ ಪಥವನ್ನು ನಾವು ಗಮನಿಸಬೇಕಿದೆ.

ಕಾಡು ರಸ್ತೆಯಲ್ಲಿ ಬೈಕ್‌ ದಾಟಿಸಲು ಸಹಕರಿಸುತ್ತಿರುವ ನಾಗಪ್ಪ
ಮನೆ ಬಾಗಿಲಲ್ಲೇ ಹಗ್ಗ ಹೊಸೆದು ಕೊಡುವ ಕನಕಪ್ಪ ಕಂಚಿ ಕೊರವರ್
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s