ನಿಧಿ’ ಹುಡುಕಾಟದಲ್ಲಿ…

ನಿಧಿ’ ಹುಡುಕಾಟದಲ್ಲಿ…

http://www.prajavani.net/BEVU-banner2

ಅಮೆರಿಕದ ಐಷಾರಾಮಿ ಜೀವನದಿಂದ ಹಳ್ಳಿಯ ಮಣ್ಣಿನ ಬದುಕು ಆರಿಸಿಕೊಂಡ ಶ್ರೀನಿಧಿ ಹಾಗೂ ಯಮುನಾ ದಂಪತಿ

ಅವು 2012ರ ಹೊಸ ವರ್ಷದ ಆರಂಭದ ದಿನಗಳು. ಆಗಷ್ಟೇ ಅಮೆರಿಕದಲ್ಲಿನ ಕೈತುಂಬ ಡಾಲರ್ ಗಳಿಸುವ ಕೆಲಸ ಕೈ ಬಿಟ್ಟು ಸ್ವದೇಶಕ್ಕೆ ಹಿಂತಿರುಗಿದ್ದ ಶ್ರೀನಿಧಿ ಮತ್ತು ಯಮುನಾ ದಂಪತಿ ಚನ್ನರಾಯಪಟ್ಟಣ ತಾಲೂಕಿನ ಹನುಮಂತಪುರ, ಸಾತೇನಹಳ್ಳಿ, ಅಡಗೂರು ಹಾಗೂ ತುಮಕೂರು ಜಿಲ್ಲೆಯ ಶಿರಾ ಸಮೀಪದ ಹುಣಸೆಕಟ್ಟಿ ಗ್ರಾಮಗಳ ರೈತರ ಮನೆ ಬಾಗಿಲಿಗೆ ಹೋಗಿ ನಿಂತ ಗಳಿಗೆಯದು.

ತಮ್ಮ ಪರಿಚಯದ ಜತೆ ಉದ್ದೇಶಗಳನ್ನು ರೈತರಿಗೆ ತಿಳಿಸುತ್ತ ನೋನಿ ಬೆಲೆ ಕುರಿತು ಇವರು ಮಾತನಾಡುತ್ತಿದ್ದರೆ, ವಂಚಕರಂತೆ ಇವರನ್ನು ಕಂಡವರೇ ಹೆಚ್ಚು. ಮೊದಮೊದಲು ಸಂಶಯ ದೃಷ್ಟಿಯಿಂದ ನೋಡಿದ ರೈತರು ಇವರ ಮಾತು ಕೇಳಿ ‘ಇವರಿಗೆಲ್ಲೋ ಹುಚ್ಚು ಹಿಡಿದಿದೆ, ಟೋಪಿ ಹಾಕಲು ಬಂದಿದ್ದಾರೆ’ ಎಂದು ಮಾತನಾಡಿಕೊಂಡರು.

ಈ ಹಿಂದೆ ವೆನಿಲ್ಲಾ ನೆಚ್ಚಿ ರೈತರು ಹಾಳಾದ ಅನೇಕ ಕಥೆಗಳನ್ನು ಹೇಳುವುದರೊಂದಿಗೆ ‘ನಿಮಗೆಲ್ಲೋ ಮರಳು, ಮರಳಿ ಹೋಗಿ ನಿಮ್ಮ ಕೆಲಸ ನೋಡಿಕೊಳ್ಳಿ’ ಎಂದದ್ದೂ ಉಂಟಂತೆ.

ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತ, ಅಮೆರಿಕದಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಸುಖ ಜೀವನ ನಡೆಸಿದ ಈ ದಂಪತಿಯಲ್ಲಿ ಬಡ ರೈತರ ಸರ್ವಾಂಗೀಣ ಅಭಿವೃದ್ಧಿಯ ಕನಸು ಮೂಡಿದ್ದೇ ಒಂದು ದೊಡ್ಡ ಕಥೆ.

ಬೇಸಿಗೆ ರಜೆಯೊಂದರಲ್ಲಿ ಮೈಸೂರಿನ ಸಮೀಪದ ಹಳ್ಳಿಯೊಂದಕ್ಕೆ ಮದುವೆ ಕಾರ್ಯಕ್ರಮಕ್ಕೆಂದು ಶ್ರೀನಿಧಿ ಬಂದಿದ್ದರು. ಆ ಹಳ್ಳಿಯ ಪರಿಸರದ ಮೂಲಕ ಗ್ರಾಮೀಣ  ಭಾರತದ ಚಿತ್ರವನ್ನು ಕಲ್ಪಿಸಿಕೊಂಡ ಶ್ರೀನಿಧಿ ಅವರಿಗೆ, ಆ ಚಿತ್ರಗಳನ್ನು ಬದಲಿಸಬೇಕು ಅನ್ನಿಸಿತು. ಅವರ ಉದ್ದೇಶಕ್ಕೆ ಹೆಗಲು ನೀಡಲು ಯಮುನಾ ಕೂಡ ಮುಂದಾದರು. ಆದರೆ ಇವರಿಗೆ ಆರಂಭದಲ್ಲಿ ಸಿಕ್ಕಿದ್ದು ಹುಚ್ಚರೆಂಬ ಹಣೆಪಟ್ಟಿ ಮಾತ್ರ!

ತಮ್ಮ ಕನಸಿನ ಹೆಜ್ಜೆಯ ಆರಂಭದ ದಿನಗಳ ಮೆಲುಕು ಹಾಕಿದ ಶ್ರೀನಿಧಿ– “ನಾವು ನಿಮ್ಮ ಕಣ್ಣಿಗೆ ಹುಚ್ಚರಂತೆ ಕಾಣುತ್ತೇವಾ?” ಎಂಬ ಪ್ರಶ್ನೆಯೊಂದಿಗೆ ಮಾತು ಆರಂಭಿಸಿದರು. ಅವರು ಅರಳು ಹುರಿದಂತೆ ಕನ್ನಡ ಮಾತನಾಡುತ್ತಾರೆ. ಆದರೂ ಇವರು ಕನ್ನಡ ಮಾತೃಭಾಷೆಯವರಲ್ಲ. ಹೈದರಾಬಾದ್‌ನಲ್ಲಿ ತಮಿಳು ಮೂಲದ ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದವರು.

ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದು, ಅಮೆರಿಕದ ಓಹಿಯೊದಲ್ಲಿರುವ ಟೊಲೆಡೊ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಪದವಿ ಪಡೆದಿರುವ ಇವರ ಪೂರ್ಣ ಹೆಸರು ಶ್ರೀನಿಧಿ ದೇಶಿಕಾಮಣಿ. ಅಂದಹಾಗೆ ಇವರು ಮೈಸೂರಿನ ಅಳಿಯ. ಅವರ ಪತ್ನಿ ಯಮುನಾ ಮಲ್ಲಿಗೆಯ ಊರಿನ ಹುಡುಗಿ, ಖ್ಯಾತ ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ ಯಮುನಾ ಅವರು ಬಿ.ಎಸ್ಸಿ ಪದವಿ ಜತೆಗೆ ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.

1998ರಲ್ಲಿ ಯಮುನಾ ಅಮೆರಿಕದ ಹ್ಯೂಸ್ಟನ್ ವಿಶ್ವವಿದ್ಯಾಲಯಕ್ಕೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿ ಪ್ರದರ್ಶನ ನೀಡಲು ಹೋದಾಗ, ಗೆಜ್ಜೆಕಟ್ಟಿದ ಅವರ ಹೆಜ್ಜೆ ಮೋಡಿಗೆ, ಭಾಷೆ, ಗಡಿ ಮೀರಿ ಮನಸೋತು ಪ್ರೀತಿಯ ಪ್ರಸ್ತಾಪ ಇಟ್ಟವರು ಶ್ರೀನಿಧಿ. ತನ್ನ ಪ್ರತಿಭೆಗೆ ಗೌರವ ತೋರಿದ ಹುಡುಗನ ಪ್ರಸ್ತಾವಕ್ಕೆ ಸಂತಸದಿಂದಲೇ ಅನುಮೋದನೆ ನೀಡಿದರು ಯಮುನಾ. ಮುಂದೆ 3 ವರ್ಷಗಳ ಕಾಲ ಪ್ರೀತಿ. ನಂತರ 2001ರಲ್ಲಿ ಪರಸ್ಪರ ಕುಟುಂಬದವರ ಒಪ್ಪಿಗೆಯ ಮೇರೆಗೆ ಮೈಸೂರಿನಲ್ಲಿ ಮದುವೆ.

ಹ್ಯೂಸ್ಟನ್‌ನಲ್ಲಿ ಸಂಸಾರ ಪ್ರಾರಂಭವಾಯಿತು. ಸುಮಾರು ಹದಿನೈದು ವರ್ಷಗಳ ಕಾಲ ಅಮೆರಿಕದ ಟೆಕ್ಸಾಸ್ ಸ್ಟೇಟ್‌ನ ಡ್ಯಾಲೆ ನಗರದಲ್ಲಿ ‘ಸ್ಯಾಪ್’ ಎಂಬ ‘ಮಾನವ ಸಂಪನ್ಮೂಲ’ ಸಲಹಾ ಸಂಸ್ಥೆಯಲ್ಲಿ ತಜ್ಞರಾಗಿ ಶೀನಿಧಿ ಸೇವೆ ಸಲ್ಲಿಸಿದವರು. ಅದೇ ರೀತಿ, ಯಮುನಾ ಹ್ಯೂಸ್ಟನ್‌ನಲ್ಲಿ ‘ನೃತ್ಯಸಿರಿ’ ಎಂಬ ನಾಟ್ಯಶಾಲೆ ತೆರೆದು ಆ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಕಲಿಸುತ್ತಾ ಬಂದವರು. ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಗೆ ಪ್ರತಿಷ್ಠಿತ ಷುಗರ್ ಲ್ಯಾಂಡ್ ನಗರದ ಮೇಯರ್ ಅವರಿಂದ ಪ್ರಶಸ್ತಿ ಪಡೆದವರು. ಕಳೆದ 20 ವರ್ಷಗಳಿಂದ ಕಾರ್ಯಕ್ರಮಗಳಿಗಾಗಿ ಅನೇಕ ದೇಶಗಳನ್ನು ಸುತ್ತಿರುವ ಯಮುನಾ ಅವರಿಗೆ ಹಲವು ಇಂಡೋ-ಅಮೆರಿಕನ್ ಸಾಂಸ್ಕೃತಿಕ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅನುಭವವಿದೆ.

ಕೆಲಸದ ನಿಮಿತ್ತ ಪ್ರತಿ ವಾರ ಹಲವಾರು ದೇಶಗಳಿಗೆ ಭೇಟಿ ನೀಡುತ್ತಿದ್ದ ಶ್ರೀನಿಧಿ 35ಕ್ಕೂ ಅಧಿಕ ದೇಶಗಳನ್ನು ಸುತ್ತಿದವರು. 2011ರಲ್ಲಿ ‘ಗ್ಲೋಬಲ್ ಎಚ್‌ಆರ್ ಇಂಟಿಗ್ರೆಷನ್ ಲೀಡ್’ ಯೋಜನೆ ಭಾಗವಾಗಿ ‘ಎಕ್ಸ್‌ಪ್ಯಾಟ್ ಅಸೈನ್‌ಮೆಂಟ್’ ಮೇಲೆ ಮೂರು ವರ್ಷದ ಅವಧಿಗಾಗಿ ಕುಟುಂಬವನ್ನು ಅಮೆರಿಕದಲ್ಲಿಯೇ ಬಿಟ್ಟು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ ಶ್ರೀನಿಧಿಗೆ ಭಾರತಕ್ಕೆ ಪದೇ ಪದೇ ಭೇಟಿ ನೀಡುವ ಅವಕಾಶ ಲಭಿಸಿತು.

ಇಂತಹ ಒಂದು ಭೇಟಿಯ ವೇಳೆ ಮದುವೆ ಸಮಾರಂಭಕ್ಕಾಗಿ ಹಳ್ಳಿಯೊಂದಕ್ಕೆ ಬಂದ ಶ್ರೀನಿಧಿ ಅದನ್ನು ಸುತ್ತು ಹಾಕಿ ದಾರಿಯಲ್ಲಿ ಸಿಕ್ಕ ರೈತರನ್ನು ಮಾತಿಗೆಳೆದು ಅವರ ಕಷ್ಟಸುಖಗಳನ್ನು ಆಲಿಸಿದ್ದರು. ಮೂಲ ಭೂತ ಸೌಕರ್ಯಗಳಿಂದ ವಂಚಿತವಾದ ಆ ಹಳ್ಳಿಯನ್ನು ಕಾಡುತ್ತಿದ್ದ ನೂರಾರು ಸಮಸ್ಯೆಗಳನ್ನು ಅವರು ಸೂಕ್ಷ್ಮಾವಲೋಕನ ಮಾಡಿ ಮನಸಿನಲ್ಲಿ ದಾಖಲಿಸಿಟ್ಟುಕೊಂಡರು.

ಸಿಂಗಾಪುರಕ್ಕೆ ವಾಪಾಸಾದ ಶ್ರೀನಿಧಿಯ ಕನಸಿನ ತುಂಬ ತುಂಬಿಕೊಂಡಿದ್ದು ತಾನು ಕಂಡ ಹಳ್ಳಿಯಲ್ಲಿ ಅನಕ್ಷರತೆ, ಕೊಳಕು, ಬಡತನ, ಅಪೌಷ್ಟಿಕತೆ, ವಂಚನೆಗೆ ಒಳಗಾದ ನಿಸ್ಸಹಾಯಕ ರೈತರ ಮುಖಗಳೇ. ಅವರಿಗಾಗಿ ಏನಾದರೂ ಮಾಡಬೇಕೆನ್ನುವ ತುಡಿತ ಅವರಲ್ಲಿ ಚಿಗುರೊಡೆಯಿತು. ಏನು ಮಾಡುವುದು? ಗೊತ್ತಿಲ್ಲ! ‘Well begun is half done’ ಎಂಬ ತತ್ವದಲ್ಲಿ ನಂಬಿಕೆಯುಳ್ಳ ಅವರು, ಕಾಡುವ ಕನಸಿಗೊಂದು ಅರ್ಥ ಕಲ್ಪಿಸಬೇಕೆಂಬ ನಿರ್ಧಾರಕ್ಕೆ ಬಂದವರೇ, 2011ರ ಡಿಸೆಂಬರ್‌ನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದರು.

ಶ್ರೀನಿಧಿಯ ನಿರ್ಧಾರ ಯಮುನಾಗೆ ಕೆಲದಿನಗಳ ಕಾಲ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ 15 ಲಕ್ಷಗಳಷ್ಟು ಗಳಿಕೆ ಇರುವ ಕೆಲಸ ಬಿಟ್ಟು ಏಕಾಏಕಿ ಹಳ್ಳಿಗಳತ್ತ ಹೆಜ್ಜೆಹಾಕುವ ಶ್ರೀನಿಧಿಯ ಕಠಿಣ ನಿರ್ಧಾರಕ್ಕೆ ಮೊದಮೊದಲು ಪ್ರತಿರೋಧ ತೋರಿದರಾದರೂ ಅದು ಬಹಳ ದಿನಗಳ ಕಾಲ ಇರಲಿಲ್ಲ.  ಶ್ರೀನಿಧಿಯ ಸ್ವಭಾವವನ್ನು ಚೆನ್ನಾಗಿ ಬಲ್ಲ ಅವರು ನಂತರದಲ್ಲಿ ಸಂತಸದಿಂದಲೇ ಬೆಂಬಲ ನೀಡಿದರು.

ರಾಜೀನಾಮೆಯ ನಂತರ ಶ್ರೀನಿಧಿ ದಂಪತಿ ಹೈದರಾಬಾದ್‌ಗಿಂತಲೂ ಬೆಂಗಳೂರು ಎಲ್ಲ ದೃಷ್ಟಿಯಿಂದಲೂ ಉತ್ತಮವಾದ ಅಂಶಗಳನ್ನು ಹೊಂದಿರುವುದನ್ನು ಮನಗಂಡು ಬೆಂಗಳೂರಿಗೆ ಬಂದು ನೆಲೆಸಿದರು. ಜತೆಗೆ ತಮ್ಮ ಸುಸ್ಥಿರ ಕಾಂತ್ರಿಯ ಕಾರ್ಯಕ್ಷೇತ್ರ­ವ­ನ್ನಾಗಿ ಮೊದಲಿಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳನ್ನು ಆಯ್ದುಕೊಂಡು ಸುಮಾರು 100 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಅಧ್ಯಯನ ನಡೆಸಿದರು.

ಅಧ್ಯಯನದ ವೇಳೆ ಕಡಿಮೆ ನೀರನ್ನು ಅವಲಂಬಿಸಿ ಬೆಳೆಯುವ, ಶುದ್ಧ ಸಾವಯವ ಮಾದರಿ ಮತ್ತು ಅಧಿಕ ಆದಾಯ ಬೆಳೆಯನ್ನು ರೈತರಿಗೆ ಪರಿಚಯಿಸಬೇಕೆಂಬ ಚಿಂತನೆ ಮೂಡಿತು. ಈ ಕುರಿತು ಹಲವರ ಜತೆ ಚರ್ಚಿಸಿದಾಗ ಹೊಳೆದದ್ದೇ ಔಷಧಿ ಬೆಳೆ ನೋನಿ. ಆಯುರ್ವೇದದಲ್ಲಿ ತುಂಬಾ ಮಹತ್ವದ ಸ್ಥಾನ ಪಡೆದಿರುವ ನೋನಿ ಹಣ್ಣನ್ನು ಅನೇಕ ಕಾಯಿಲೆಗಳಿಗೆ ಔಷಧವಾಗಿ ಬಳಕೆಮಾಡಲಾಗುತ್ತದೆ. ಯೋಚನೆ ಹೊಳೆದದ್ದೇ ತಡ, ಶ್ರೀನಿಧಿ ರಾಜಸ್ತಾನ, ಚೀನಾಗೆ ಭೇಟಿ ನೀಡಿ ನೋನಿ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿದರು.

ನಂತರ ಈ ದಂಪತಿ ನೇರವಾಗಿ ನಡೆದದ್ದು ರೈತರ ಮನೆ ಬಾಗಿಲಿಗೆ. ಆಗ ಎದುರಾದದ್ದೇ ಮೇಲಿನ ಅನುಭವ. ರೈತರ ಮನಸಿನಲ್ಲಿರುವ ಸಂಶಯದ ಭೂತವನ್ನು ಹೋಗಲಾಡಿಸಿ, ಅವರಲ್ಲಿ ಭರವಸೆ ಮೂಡಿಸುವುದು ಹೇಗೆ ಎಂದು ಚಿಂತಿಸುತ್ತಿರುವಾಗ ಶ್ರೀನಿಧಿಗೆ ಹೊಳೆದದ್ದು ‘ಒಪ್ಪಂದದ ಕೃಷಿ’ ಯೋಚನೆ. ರೈತರೊಂದಿಗೆ ಶ್ರೀನಿಧಿ ಮಾಡಿಕೊಳ್ಳುವ ಈ ಒಪ್ಪಂದದಲ್ಲಿ ರೈತರು ಬೆಳೆದ ನೋನಿ ಫಸಲನ್ನು ಮಾರುಕಟ್ಟೆ ಬೆಲೆಗೆ ಖರೀದಿಸುವುದು. ಒಂದು ವೇಳೆ ಮಾರುಕಟ್ಟೆ ಬೆಲೆ ಕುಸಿದರೆ ಪ್ರತಿ ಕೆ.ಜಿಗೆ ಕನಿಷ್ಠ ಹತ್ತು ರೂಪಾಯಿ ಬೆಲೆ ನೀಡುವುದು. ಇದರಿಂದಾಗಿ ಮೊದಲ ಹಂತದಲ್ಲಿ 7-– 8 ರೈತರು ನೋನಿ ಬೆಳೆಯಲು ಮುಂದೆ ಬಂದಿದ್ದಾರೆ.

ಎಲ್ಲ ಬಗೆಯ ಮಣ್ಣಿನಲ್ಲಿ ಹೆಚ್ಚಿನ ಖರ್ಚಿಲ್ಲದೇ ಶುದ್ಧ ಸಾವಯವ ಪದ್ಧತಿಯಲ್ಲಿ ಬೆಳೆಯುವ ನೋನಿ ಮರವು ಐವತ್ತು ವರ್ಷಕ್ಕೂ ಅಧಿಕ ಕಾಲ ಬದುಕುತ್ತದೆ. 12 ಅಡಿಗೆ ಒಂದರಂತೆ ಒಂದು ಎಕರೆಗೆ ಸುಮಾರು 270 ನೋನಿ ಸಸಿ ನಾಟಿ ಮಾಡಬಹುದು. ನಾಟಿ ಮಾಡಿದ ಸಸಿಯು ಆರು ತಿಂಗಳಿಗೆ ಫಲ ನೀಡಲು ಪ್ರಾರಂಭಿಸುತ್ತದೆ. ಆಗ ಮೊದಲ ವರ್ಷದ ಫಲವನ್ನು ಕತ್ತರಿಸಿ ಗಿಡಗಳ ಬುಡಕ್ಕೆ ಹಾಕಬೇಕು. ಇದರಿಂದ ಗಿಡವು ಸಾವಯವ ಪದ್ಧತಿಯಲ್ಲಿ ಸದೃಢವಾಗಿ ಬೆಳೆಯಲು ಅನುಕೂಲವಾಗುತ್ತದೆ.

ಪ್ರತಿ ನಲವತ್ತು ದಿನಗಳಂತೆ ವರ್ಷದಲ್ಲಿ 8 ಬಾರಿ ನೋನಿ ಗಿಡವು ಫಲ ನೀಡುತ್ತದೆ. ಎರಡನೆಯ ವರ್ಷಕ್ಕೆ ಒಂದು ಗಿಡದಿಂದ 2-4 ಕೆ.ಜಿ ಫಲ ಸಿಗುತ್ತದೆ. ಇದನ್ನು ಕನಿಷ್ಠ 10 ರೂಪಾಯಿ ಬೆಲೆಗೆ ಮಾರಾಟ ಮಾಡಿದರೂ ಕೂಡ ರೈತರಿಗೆ ಎಕರೆಯೊಂದಕ್ಕೆ 60 ಸಾವಿರಕ್ಕೂ ಅಧಿಕ ಆದಾಯ ದೊರೆಯುತ್ತದೆ. ಇನ್ನೂ ಗಿಡವನ್ನು ಚೆನ್ನಾಗಿ ಆರೈಕೆ ಮಾಡಿದರೆ ಐದು ವರ್ಷದ ವೇಳೆಗೆ ಗಿಡವೊಂದರ ಫಲವು 12-30 ಕೆ.ಜಿಗೆ ತಲುಪುತ್ತದೆ. ಆಗ ಕನಿಷ್ಠ ಬೆಲೆ ಪಡೆದರೂ ರೈತರ ಆದಾಯವು ಎಕರೆಗೆ ನಾಲ್ಕೈದು ಲಕ್ಷಗಳವರೆಗೆ ತಲುಪುತ್ತದೆ. ಜತೆಗೆ ರೈತರು ಗಿಡಗಳ ನಡುವೆ ಇರುವ ಖಾಲಿ ಜಾಗದಲ್ಲಿ ತರಕಾರಿಗಳನ್ನು ಕೂಡ ಬೆಳೆದುಕೊಳ್ಳಬಹುದು ಎನ್ನುತ್ತಾರೆ ಶ್ರೀನಿಧಿ.

ರೈತರಿಂದ ಪಡೆದ ಫಸಲನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಸ್ಥಾಪಿಸಿರುವ ಔಷಧಿ ತಯಾರಿಕಾ ಘಟಕಕ್ಕೆ ರವಾನಿಸಲಾಗುತ್ತದೆ. ಅಲ್ಲಿ ಹಲವಾರು ಕಾಯಿಲೆಗಳಿಗೆ ಮದ್ದಾಗಿ ಬಳಕೆ ಮಾಡಬಹುದಾದ ‘ಬೇವು ನೋನಿ ಆ್ಯಕ್ಟಿವ್ ಲೈಫ್‌ಸ್ಟೈಲ್’ ಹಾಗೂ ಮಧುಮೇಹ ಕಾಯಿಲೆಗೆ ಸಂಬಂಧಿತ ‘ಬೇವು ನೋನಿ ಡಿ’ ಎಂಬ ಔಷಧಿಗಳನ್ನು ತಯಾರಿಸಿ ಮಾರಾಟ ಮಾಡುವ ಶ್ರೀನಿಧಿ, 15 ಜನರಿಗೆ ಉದ್ಯೋಗ ಕೂಡ ನೀಡಿದ್ದಾರೆ.

ಬೇವು ಪ್ರತಿಷ್ಠಾನ
ಹಳ್ಳಿಗಳಲ್ಲಿ ಆರೋಗ್ಯಯುತ ಪರಿಸರ ಹಾಗೂ ಸುಸ್ಥಿರ ಕ್ರಾಂತಿಯ ಬೆಳಕು ಕಾಣಬೇಕೆಂಬ ಹಂಬಲ ಹೊಂದಿರುವ ಶ್ರೀನಿಧಿ ಹಾಗೂ ಯಮುನಾ ಅವರು ಇತ್ತೀಚೆಗೆ ಬೇವು ಪ್ರತಿಷ್ಠಾನ ಎಂಬ ಸರ್ಕಾರೇತರ ಸಂಸ್ಥೆಯೊಂದನ್ನು (ಎನ್‌ಜಿಓ) ಸ್ಥಾಪಿಸಿದ್ದಾರೆ.

ಈ ಸಂಸ್ಥೆಯ ಮೂಲಕ ಗ್ರಾಮಗಳಲ್ಲಿ ಕಾರ್ಯಾಗಾರಗಳನ್ನು ನಡೆಸುವ ಇವರು ಸಾಕ್ಷರತೆಯ ಮಹತ್ವ, ಸ್ವಚ್ಛ ಕುಡಿಯುವ ನೀರು, ರೋಗ ತಡೆಗಟ್ಟುವಿಕೆ, ಪೌಷ್ಟಿಕ ಆಹಾರದ ಮಹತ್ವ, ಆರೋಗ್ಯ, ನಿರ್ಮಲೀಕರಣ ಸಮಸ್ಯೆಗಳ ಕುರಿತು ಅರಿವು, ಪರಿಸರ ಸ್ನೇಹಿ ಶೌಚಾಲಯಗಳ ಬಳಕೆ, ನೆಲ-ಜಲ ಮಾಲಿನ್ಯ ತಡೆಗಟ್ಟುವಿಕೆ, ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಮಹತ್ವ, ಮಹಿಳೆಯರ ಶಿಕ್ಷಣ, ಹೆರಿಗೆ ಮತ್ತು ಬಾಣಂತಿಯರ ಆರೋಗ್ಯ, ಕಲೆ, ಕಸಬು ಮತ್ತು ಸಂಸ್ಕೃತಿ ಕುರಿತಾದ ವಿಷಯಗಳ ಅರಿವು ಮೂಡಿಸುತ್ತಿದ್ದಾರೆ.

ಬೇವು ಪ್ರತಿಷ್ಠಾನದ ಮೊದಲ ಹೆಜ್ಜೆಯಾಗಿ ಇತ್ತೀಚೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹನುಮಂತಪುರ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ ಸ್ವಯಂ ಸೇವಕರಾಗಿ ಆಗಮಿಸಿದ ಚಿಕಾಗೊದ ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿಯ ಮೂವರು ವಿದ್ಯಾರ್ಥಿಗಳ ನೆರವಿನಿಂದ ‘ರೋಪ್’ (ರೂರಲ್ ಔಟ್‌ರಿಚ್ ಪೋಗ್ರಾಮಿಂಗ್ ಎಫರ್ಟ್) ಯೋಜನೆಯನ್ನು ರ್ಯಗತಗೊಳಿಸಲಾಯಿತು.

ಈ ವೇಳೆ ಹಳ್ಳಿಯ ರೈತಾಪಿ ಕುಟುಂಬಗಳೊಡನೆ ಹತ್ತು ದಿನಗಳ ಕಾಲ ಕಳೆದ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಸ್ಥಳೀಯರೊಂದಿಗೆ ಶ್ರಮದಾನದ ಮೂಲಕ ಆಟದ ಮೈದಾನವೊಂದನ್ನು ನಿರ್ಮಿಸಿದರು. ಜತೆಗೆ ಆಟೋಪಕರಣಗಳನ್ನು ಒದಗಿಸಲಾಯಿತು. ಪ್ರಾಥಮಿಕ ಶಾಲೆಗೆ ಪಠ್ಯೇತರ ಚಟುವಟಿಕೆ ಹಾಗೂ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪೂರಕವಾದ ಪುಸ್ತಕಗಳುಳ್ಳ ಗ್ರಂಥಾಲಯವೊಂದನ್ನು ತೆರೆಯಲು ಸಹಾಯ ಮಾಡಲಾಯಿತು. ಜತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಾವಯವ ಕೃಷಿ ಕುರಿತ ಉಪನ್ಯಾಸ ಮತ್ತು ಮಕ್ಕಳಿಗೆ ಯಮುನಾ ಅವರಿಂದ ಭರತನಾಟ್ಯ ಪಾಠ ಹೇಳಿಕೊಡಲಾಯಿತು.

ಈ ಯೋಜನೆಯನ್ನು ಮುಂದಿನ ಹಂತದಲ್ಲಿ ಅಡಗೂರು, ಸಾತೇನಹಳ್ಳಿ, ಗೂಳಿ ಹೊನ್ನೇನಹಳ್ಳಿ ಮತ್ತು ಹೆಬ್ಬಾಳು ಗ್ರಾಮಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ಶ್ರೀನಿಧಿ.

ಶ್ರೀನಿಧಿಯ ಎಲ್ಲ ಕಾರ್ಯಗಳಿಗೂ ಬೆನ್ನೆಲುಬಾಗಿ ನಿಂತಿರುವ ಯಮುನಾ ಅವರು ಈಗಲೂ ಅಮೆರಿಕದ ತಮ್ಮ ವಿದ್ಯಾರ್ಥಿಗಳಿಗೆ ಅಂತರಜಾಲದ ‘ಸ್ಕೈಪ್’ ವ್ಯವಸ್ಥೆಯ ಮೂಲಕ ಪಾಠ ಮಾಡುವುದರೊಂದಿಗೆ ಐದಾರು ತಿಂಗಳಿಗೊಮ್ಮೆ ಅಮೆರಿಕ ಭೇಟಿ ನೀಡಿ ಶಿಷ್ಯರ ಹೆಜ್ಜೆ ತಿದ್ದಿ ಬರುತ್ತಾರೆ. ಜತೆಗೆ ಈಟೀವಿಯ ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. 9 ವರ್ಷದ ಮಗ ವೇದಾಂತ, 6 ವರ್ಷದ ಮಗಳು ಲಾಸಿಯಾ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಹಳ್ಳಿಗಳಿಂದ ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಬರುವ ಬಹುತೇಕರು ಮೂಲ ನೆಲೆಗಳನ್ನು ನಿರ್ಲಕ್ಷಿಸಿ ನಗರಗಳಲ್ಲಿಯೇ ಬದುಕು ಕಟ್ಟಿಕೊಳ್ಳಲು ಬಯಸುವುದನ್ನು ಇಂದು ನಾವು ಎಲ್ಲೆಡೆ ಕಾಣುತ್ತಿರುವಾಗ ಏಳಂಕಿ ಗಳಿಕೆಯನ್ನು ಬಿಟ್ಟು ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿ ಕನಸಿನೊಂದಿಗೆ ಹಂಬಲಿಸಿ ಬಂದಿರುವ ಈ ದಂಪತಿಗಳ ಸಮಾಜಮುಖಿ ಚಿಂತನೆ ಮಾದರಿಯಲ್ಲವೇ?
ಆಸಕ್ತರು -97415 55281 ಈ ಸಂಖ್ಯೆ ಮೂಲಕ ಶ್ರೀನಿಧಿ ಅವರೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.

ಹನುಮಂತಪುರ ಗ್ರಾಮಸ್ಥರೊಂದಿಗೆ ಶ್ರೀನಿಧಿ ದಂಪತಿ
ನೋನಿ ಹಣ್ಣಿನೊಂದಿಗೆ ಶ್ರೀನಿಧಿ, ಯಮುನಾ
  • (anaamikamathu.wordpress.com)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s